    ಮೂಲದೊಡನೆ ಹೋಲಿಸಿ

ಕಯನೈಟ್ : ಸಿಲಿಕೇಟ್ ಜಾತಿಗೆ ಸೇರಿದ ರೂಪಾಂತರಿತ ಶಿಲೆಗಳಲ್ಲಿ ದೊರೆವ ಒಂದು ಖನಿಜ. ಅಣುಸೂತ್ರ ಂಟ2Siಔ5 . ಇದೊಂದು ಅಲ್ಯೂಮಿನಿಯಮ್ಮಿನ ಸಿಲಿಕೇಟ್. ಪ್ರಾದೇಶಿಕ ರೂಪ ಪರಿವರ್ತನೆಯಿಂದ ಉದ್ಭವಿಸಿದ ನೈಸುಗಳು ಮತ್ತು ಶಿಷ್ಟುಗಳ ಜೊತೆಗಿರುವುದು 
ಇದರ ವಿಶಿಷ್ಟ ಲಕ್ಷಣ. ಕಯನೈಟ್ ಎಂಬ ಶಬ್ದ ಗ್ರೀಕ್ ಶಬ್ದವಾದ ಕುಅನೋಸ್ ಎಂಬುದರಿಂದ ನಿಷ್ಪನ್ನವಾಗಿದೆ. ಇದರ ಅರ್ಥ ಕಪ್ಪುನೀಲಿಯ ವಸ್ತು ಎಂದು. ಇದು ಈ ಖನಿಜದ ನೀಲವರ್ಣವನ್ನು ಸೂಚಿಸುತ್ತದೆ. ಕಯನೈಟಿನ ಬಣ್ಣ ಸಾಮಾನ್ಯವಾಗಿ ನೀಲಿಯಿಂದ ಹಿಡಿದು 
ಬಿಳಿಯ ಬಣ್ಣದವರೆಗೂ ಹರಡಿದೆಯಲ್ಲದೆ ಇದು ಬೂದು, ಹಸಿರು, ಹಳದಿಯಾಗಿರುವುದೂ ಉಂಟು. ಉದ್ದವಾದ ಅಲಗಿನಾಕಾರದಿಂದ ಹಿಡಿದು ಸ್ತಂಭಾಕಾರದ ಹರಳುಗಳ ರೂಪದಲ್ಲಿ ಇದು ದೊರೆಯುತ್ತದೆ. ಚೆನ್ನಾಗಿ ಸೀಳಲು ಬರುವಂತಿದೆ. ಈ ಖನಿಜದ ಗಡಸುತನ 
(ಹಾರ್ಡ್ನೆಸ್) ಹರಳಿನ ಮುಖವನ್ನು ಅವಲಂಬಿಸಿ 5-7ರ ವರೆಗಿದೆ. ಸಾಪೇಕ್ಷಸಾಂದ್ರತೆ 3.56-3.66 ವರೆಗಿದೆ. ಕಯನೈಟ್ ಖನಿಜ ಮೃತ್ತಿಕಾ ಶಿಲೆಗಳ (ಪೆಲಿಟಿಕ್ ಶಿಲೆಗಳ) ಪ್ರಾದೇಶಿಕ ರೂಪಾಂತರೀಕರಣದಿಂದ ಉದ್ಭವಿಸಿದೆ. 600 ಡಿಗ್ರಿ ಸೆಂ.ಉಷ್ಣತೆ ಮತ್ತು 5000 
ವಾಯುಮಾನ ಒತ್ತಡದಲ್ಲಿ ಇದನ್ನು ಸಂಶ್ಲೇಷಿಸಬಹುದು. ಸಾಮಾನ್ಯವಾಗಿ ಮೈಕ, ಗಾರನೆಟ್, ಕೋರಂಡಂ ಮತ್ತು ಸಿಲ್ಲಿಮನೈಟ್ ಜೊತೆಗೆ ಕಯನೈಟ್ ಇರುವುದು. ಈ ಖನಿಜವನ್ನು ರಿಫ್ರಾಕ್ಟರಿಗಳಲ್ಲಿನ ಬಗೆಬಗೆಯ ಕುಲುಮೆಗಳಲ್ಲಿ ಒಳಲೇಪಕ್ಕಾಗಿ ಬಳಸುತ್ತಾರೆ. ಕೆಲವು 
ಗಾಜು ಮತ್ತು ಪಿಂಗಾಣಿ ಸಾಮಾನುಗಳ ಉದ್ಯೋಗಗಳಲ್ಲೂ ಮತ್ತು ಕಿಡಿಬೆಣೆಗಳನ್ನು ತಯಾರಿಸಲೂ ಇದರ ಉಪಯೋಗವಿದೆ. ಪಾರಕ ಮತ್ತು ನಿಷ್ಕಲ್ಮಷ ಕಯನೈಟನ್ನು ರತ್ನಗಳಂತೆ ಉಪಯೋಗಿಸುತ್ತಾರೆ. ಕಯನೈಟ್ ನಿಕ್ಷೇಪಗಳು ಬಿಹಾರ್, ಒರಿಸ್ಸ, ಮಧ್ಯಪ್ರದೇಶ, 
ಅಸ್ಸಾಂಗಳಲ್ಲಿ ದೊರೆಯುತ್ತದೆ. ಕರ್ನಾಟಕದಲ್ಲಿ ಇದು ಸಿಕ್ಕುವ ಸ್ಥಳಗಳು ಹಾಸನ, ಚಿತ್ರದುರ್ಗ ಮತ್ತು ಮೈಸೂರು ಜಿಲ್ಲೆ.         (ಎಸ್.ಬಿ.ಎಲ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ